ರೇಡಾರ್
ದೃಷ್ಟಿವ್ಯಾಪ್ತಿಯಲ್ಲಿಲ್ಲದ ವಸ್ತುಗಳ ಗಾತ್ರ, ಸ್ಥಾನ, ದೂರ, ವೇಗ ಮತ್ತು ಚಲನದಿಶೆ ಪ್ರಕ್ಷೇಪಿತ ರೇಡಿಯೊತರಂಗಗಳ ನೆರವಿನಿಂದ ನಿರ್ಧರಿಸಲು ಬಳಸುವ ಎಲೆಕ್ಟ್ರಾನಿಕ್ ವ್ಯವಸ್ಥೆ. ದ್ವಿತೀಯ ಜಾಗತಿಕ ಯುದ್ಧಾವಧಿಯಲ್ಲಿ ಮಿತ್ರರಾಷ್ಟ್ರ ಸೈನ್ಯಗಳು ರೇಡಿಯೊ (ಆರ್‍ಎ) ಡಿಟೆಕ್ಷನ್ (ಡಿ) ಅ್ಯಂಡ್ (ಎ) ರೇಂಜಿಂಗ್ (ಆರ್) ಎಂಬ ಇಂಗ್ಲಿಷ್ ಪದ ಸಮುಚ್ಚಯದ ಪ್ರತಿಯೊಂದು ಪದದ ಆದ್ಯಕ್ಷರಗಳನ್ನು ಕೂಡಿಸಿ ಸೃಷ್ಟಿಸಿದ ಹ್ರಸ್ವರೂಪ(ಆರ್‍ಎಡಿಎಆರ್). ಯುದ್ಧೋಪಕರಣವಾಗಿ ರೂಪುಗೊಂಡಿದ್ದರೂ ನೌಕಾಯಾನ ಮತ್ತು ವಿಮಾನ ಸಂಚಾರ ನಿಯಂತ್ರಣ, ಹವಾಪ್ರರೂಪ ಪತ್ತೆ, ವ್ಯೋಮನೌಕೆಗಳ ಗತಿವೀಕ್ಷಣೆ, ಖಗೋಳವಿಜ್ಞಾನ, ದೃಷ್ಟಿವ್ಯಾಪ್ತಿಯಲ್ಲಿ ಚಲಿಸುತ್ತಿರುವ ವಸ್ತುಗಳ ವೇಗನಿರ್ಧಾರ ಮುಂತಾದ ವಕ್ಕೂ ರೇಡಾರ್‍ನ ಬಳಕೆ ಉಂಟು.

ಚಿತ್ರ-ಬಹುಬಲ-ಮ್ಯಾಗ್ನೆಟ್ರಾನ್

ಇತಿಹಾಸ: ಕೆಲವೇ ಸೆಂಟಿಮೀಟರುಗಳಿಂದ ಮೊದಲ್ಗೊಂಡು ಸುಮಾರು ಒಂದು ಮೀಟರ್ ವರೆಗೆ  ಅಲೆಯುದ್ಧಗಳಿರುವ ವಿದ್ಯುತ್ಕಾಂತ ವಿಕಿರಣ ದೂಲಗಳನ್ನು ಪ್ರಸರಿಸಬಲ್ಲ ಉಚ್ಚ-ಆವೃತ್ತಿ ರೇಡಿಯೊ ಪ್ರೇಷಕವನ್ನು ಎಲ್ಲ ರೇಡಾರ್ ವ್ಯವಸ್ಥೆಗಳೂ ಉಪಯೋಗಿಸುತ್ತವೆ. ದೂಲ ಪಥದಲ್ಲಿರುವ ವಸ್ತುಗಳು ರೇಡಿಯೊ ತರಂಗಗಳನ್ನು ಪ್ರತಿಫಲಿಸಿ ಪ್ರೇಷಕಕ್ಕೆ ಮರಳಿಸುತ್ತವೆ. ರೇಡಿಯೊ ತರಂಗದ ವೇಗ, ಅದು ಮರಳಿ ಬರಲು ತೆಗೆದುಕೊಂಡ ಸಮಯ ಇವನ್ನು ಉಪಯೋಗಿಸಿ ಅಪೇಕ್ಷಿತ ಮಾಹಿತಿಯನ್ನು ಗಣಿಸಬಹುದು. ರೇಡಾರ್‍ನ ಮೂಲ ಪರಿಕಲ್ಪನೆಗಳು ರೇಡಿಯೊತರಂಗಗಳ ಪ್ರತಿಫಲನ ನಿಯಮಗಳನ್ನು ಆಧರಿಸಿವೆ. ಇವು ವಿದ್ಯುತ್ಕಾಂತ ತರಂಗಗಳ ವರ್ತನೆಗೆ ಸಂಬಂಧಿಸಿದಂತೆ ಬ್ರಿಟಿಷ್ ಭೌತವಿಜ್ಞಾನಿ ಜೇಮ್ಸ್ ಕ್ಲರ್ಕ್ ಮ್ಯಾಕ್ಸ್‍ವೆಲ್ (1831-79) ರೂಪಿಸಿದ (1864) ಸಮೀಕರಣಗಳಲ್ಲಿ ಅಂತರ್ಗತವಾಗಿವೆ. ಈ ತತ್ತ್ವಗಳನ್ನು ಮೊದಲು ಪ್ರಯೋಗ ಮುಖೇನ ಸಾದರಪಡಿಸಿದವ (1886) ಜರ್ಮನ್ ಭೌತವಿಜ್ಞಾನಿ ಹೆನ್ರಿಚ್ ರುಡಾಲ್ಫ್ ಹಟ್ರ್ಸ್ (1857-94). ಸಮುದ್ರಯಾನ ದಲ್ಲಿ ನೌಕೆಗಳು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ವಿನ್ಯಾಸಗೊಳಿಸಿದ ಸಂಸೂಚಕದಲ್ಲಿ (ಡಿಟೆಕ್ಟರ್) ರೇಡಿಯೊ ಪ್ರತಿಧ್ವನಿಗಳ ಬಳಕೆಯನ್ನು ಆವಿಷ್ಕರಿಸಿದವ (1901) ಜರ್ಮನ್ ಎಂಜಿನಿಯರ್ ಕ್ರಿಶ್ಚಿಯನ್ ಹೂಲ್ಸ್‍ಮೆಯೆರ್. ಇಂಥದ್ದೊಂದು ಉಪಕರಣವನ್ನು ವಿಮಾನಗಳಲ್ಲಿ ಬಳಸಬಹುದೆಂದು ಸೂಚಿಸಿದವ (1922) ಇಟಲಿಯ ಉಪಜ್ಞಕ ಮಾರ್ಖೀಸ್ ಗಗ್ಲಿಯೆಲ್ಮೊ ಮಾರ್ಕೋನಿ (1874-1937).

	ಚಿತ್ರ-ಕ್ಲೈಸ್ಟ್ರಾನ್‍ಭಾಗಗಳು	

ಬ್ರಿಟಿಷ್ ಭೌತವಿಜ್ಞಾನಿ ಎಡ್ವರ್ಡ್ ವಿಕ್ಟರ್ ಆಪಲ್‍ಟನ್(1892-1965) ರೇಡಿಯೊ ಪ್ರತಿಧ್ವನಿಗಳನ್ನು ಉಪಯೋಗಿಸಿ ಅಯಾನ್‍ಗೋಳದ ಎತ್ತರ ನಿರ್ಧರಿಸಿದ್ದು (1924) ರೇಡಾರ್ ಆವಿಷ್ಕಾರಕ್ಕೆ ಬುನಾದಿ ಹಾಕಿದ ಮೊದಲನೆಯ ಯಶಸ್ವೀ ಪ್ರಯೋಗ. ರೇಡಿಯೊ-ಸ್ಪಂದ (ಪಲ್ಸ್) ತಂತ್ರ ಉಪಯೋಗಿಸಿ (1925) ಆಪಲ್‍ಟನ್ ಪಡೆದ ಫಲಿತಾಂಶಗಳನ್ನೇ ಗ್ರಿಗರಿ ಬ್ರೆಯ್ಟ್ (1899-1981) ಮತ್ತು ಮೆರ್ಲೆ ಆ್ಯಂಟನಿ ತುವೆ (1901-82) ಎಂಬ ಅಮೆರಿಕನ್ ಭೌತವಿಜ್ಞಾನಿಗಳು ಪಡೆದರು. ಮುಂದೆ ಅನೇಕ ರೇಡಾರ್‍ಗಳಲ್ಲಿ ಅಳವಡಿಕೆಯಾದ ಈ ತಂತ್ರ ಪೂರ್ಣ ವಿಕಸಿಸಿದ್ದು ಎಲೆಕ್ಟ್ರಾನಿಕ್ ತಂತ್ರವಿದ್ಯೆ ಮತ್ತು ಉಪಕರಣಗಳ ಸುಧಾರಣೆಯಾದ ಬಳಿಕ (1930ರ ದಶಕ). 

ಬ್ರಿಟಿಷ್ ಭೌತವಿಜ್ಞಾನಿ ರಾಬರ್ಟ್ ವಾಟ್ಸನ್ ವಾಟ್(1892-1973) ಮೊದಲನೆಯ ರೇಡಾರ್ ವ್ಯವಸ್ಥೆ ನಿರ್ಮಿಸಿದ (1935). ಅದೇ ವರ್ಷ ಬ್ರಿಟಿಷ್ ಭೌತವಿಜ್ಞಾನಿ ಹೆನ್ರಿ ಆಲ್ಬರ್ಟ್ ಹೋವರ್ಡ್ ಬೂಟ್ (ಜ 1917) ಮತ್ತು ಜೀವಭೌತವಿಜ್ಞಾನಿ ಜಾನ್ ಟರ್ಟನ್ ರ್ಯಾಂಡಲ್ (1905-84) ಉಪಜ್ಞಿಸಿದ ಅನುರಣಿಸುವ ಕುಳಿ (ರೆಸೊನೆಂಟ್ ಕ್ಯಾವಿಟಿ) ಮ್ಯಾಗ್ನೆಟ್ರಾನ್ ಎಂಬ ಹೆಸರಿನ ಎಲೆಕ್ಟ್ರಾನ್ ನಳಿಕೆ ಆಧುನಿಕ ರೇಡಾರ್ ತಂತ್ರವಿದ್ಯೆಯ ವಿಕಾಸಕ್ಕೆ ಕಾರಣವಾಯಿತು. ಅಧಿಕ ಸಾಮಥ್ರ್ಯವುಳ್ಳ ಉಚ್ಚ ಆವೃತ್ತಿಯ ರೇಡಿಯೊ ಸ್ಪಂದಗಳನ್ನು ಉತ್ಪಾದಿಸುವ ಸಾಮಥ್ರ್ಯ ಇದಕ್ಕಿತ್ತು. ಇದರಿಂದಾಗಿ ಲೇಸರ್ ಬಳಸಿ 1 ಸೆಂಮೀಗಿಂತ ಕಡಿಮೆ ಅಲೆಯುದ್ದ ಪಟ್ಟೆಯಲ್ಲಿ ಕಾರ್ಯಮಾಡಬಲ್ಲ ಸೂಕ್ಷ್ಮತರಂಗ (ಮೈಕ್ರೊ ವೇವ್) ರೇಡಾರ್ ನಿರ್ಮಾಣ ಸಾಧ್ಯವಾಯಿತು. ದೂರಸಂವಹನ ದಲ್ಲಿ ಮತ್ತು ವಾಯುಮಂಡಲ ಮಾಲಿನ್ಯ ಅಳೆಯಲು ಲೈಡಾರ್ (ಲೈಟ್ ಡಿಟೆಕ್ಷನ್ ಅಂಡ್ ರೇಂಜಿಂಗ್) ಎಂಬ ಹೆಸರೂ ಉಳ್ಳ ಈ ರೇಡಾರ್‍ನ ಬಳಕೆ ವ್ಯಾಪಕವಾಗಿದೆ.
ಕಾರ್ಯವಿಧಾನ: ಪ್ರೇಷಕ, ಆಂಟೆನ, ಅಭಿಗ್ರಾಹಕ ಮತ್ತು ಸೂಚಕ ಇವು ಸರಳ ರೇಡಾರ್ ವ್ಯವಸ್ಥೆಯ ಪ್ರಧಾನ ಘಟಕಗಳು. ಯುಕ್ತ ಅಲೆಯುದ್ದದ ಪ್ರಸಾರಯೋಗ್ಯ ರೇಡಿಯೊ ತರಂಗಗಳನ್ನು ಪ್ರೇಷಕ ಉತ್ಪಾದಿಸಿ ಆಂಟೆನಕ್ಕೆ ರವಾನಿಸುತ್ತದೆ. ಈ ರೇಡಿಯೊ ತರಂಗಗಳನ್ನು ಸಾರೀಕರಿಸಿ ದೂಲ ರೂಪವಿತ್ತು ಅಪೇಕ್ಷಿತ ದಿಶೆಯಲ್ಲಿ ಆಂಟೆನ ಪ್ರಸಾರ ಮಾಡುತ್ತದೆ. ದೂಲದ ಪಥದಲ್ಲಿರುವ ಪ್ರತಿಫಲನ ಸಾಮಥ್ರ್ಯವಿರುವ ಯಾವುದೇ ವಸ್ತುವಿಗೆ ತರಂಗಗಳು ತಾಕಿದಾಗ ಕೆಲವನ್ನು ಅದು ಪ್ರತಿಫಲಿಸುತ್ತದೆ. ಪ್ರತಿಫಲಿತ ರೇಡಿಯೊ ತರಂಗಗಳಿಗೆ ಪ್ರತಿಧ್ವನಿ ಸಂಜ್ಞೆ ಎನ್ನುತ್ತಾರೆ. ಇದನ್ನು  ಆಂಟೆನ ಸಂಗ್ರಹಿಸಿ ಅಭಿಗ್ರಾಹಕಕ್ಕೆ ರವಾನಿಸುತ್ತದೆ. ಅಭಿಗ್ರಾಹಕ ಅದನ್ನು ಪ್ರವರ್ಧನ ಪ್ರಕ್ರಿಯೆ ಮತ್ತು ಗಣಕ ಸಂಸ್ಕರಣೆಗಳಿಗೆ ಒಳಪಡಿಸಿ ಸೂಚಕದ ಪರದೆಯ ಮೇಲೆ ದೃಶ್ಯ ಸಂಜ್ಞೆಯೊಂದನ್ನು ಮೂಡಿಸುವುದಲ್ಲದೆ ಅಪೇಕ್ಷಿತ ಮಾಹಿತಿಯನ್ನು ಲೆಕ್ಕಿಸಿ ಪ್ರದರ್ಶಿಸುತ್ತದೆ ಕೂಡ.

ರೇಡಾರ್ ವ್ಯವಸ್ಥೆ: ಆಧುನಿಕ ರೇಡಾರ್ ಸಮಷ್ಟಿ ಅದರ ಉಪಯೋ ಗದ ಉದ್ದೇಶಕ್ಕೆ ತಕ್ಕುದಾದ ಅನೇಕ ಪ್ರಮುಖ ಉಪವ್ಯವಸ್ಥೆಗಳು ಹಾಗೂ ವಿಶಿಷ್ಟ ಮಂಡಲಗಳುಳ್ಳ ಒಂದು ಸಂಕೀರ್ಣ ಎಲೆಕ್ಟ್ರಾನಿಕ್ ವ್ಯವಸ್ಥೆ. ವ್ಯವಸ್ಥೆಯ ವಿನ್ಯಾಸ ಮತ್ತು ಹೆಸರು ಬಳಕೆಯ ಉದ್ದೇಶವನ್ನು ಅವಲಂಬಿಸಿದೆ (ಉದಾ: ಏರ್ ಸರ್ಚ್ ರೇಡಾರ್, 3-ಡಿ ರೇಡಾರ್, ಅಗ್ನಿನಿಯಂತ್ರಕ ರೇಡಾರ್). ಇವೆಲ್ಲವೂ ಸರಳ ಸ್ಪಂದರೇಡಾರ್ ವ್ಯವಸ್ಥೆಯ ಪ್ರಮುಖ ಘಟಕಗಳ ಸುಧಾರಿತ ರೂಪಾಂತರಗಳು. ಮಾಡ್ಯುಲೇಟರ್, ಪ್ರೇಷಕ, ಡ್ಯೂಪ್ಲೆಕ್ಸರ್, ಆಂಟೆನ, ಗ್ರಾಹಕ ಮತ್ತು ಸೂಚಕ ಇವು ಸರಳ ರೇಡಾರ್ ವ್ಯವಸ್ಥೆಯ ಪ್ರಮುಖ ಭಾಗಗಳು.

ಚಿತ್ರ-ರೇಡಾರ್-ವ್ಯವಸ್ಥೆಯ-ಭಾಗಗಳು

ಮಾಡ್ಯುಲೇಟರ್: ರೇಡಾರ್‍ನ ಎಲ್ಲ ಉಪವ್ಯವಸ್ಥೆಗಳಿಗೆ ಅಗತ್ಯವಾದ ಕಾಲನಿಯಮನ (ಟೈಮಿಂಗ್) ಸ್ಪಂದಗಳನ್ನು ಅಥವಾ ಮೋಚಕಗಳನ್ನು (ಟ್ರಿಗರ್ಸ್) ಇದು ಉತ್ಪಾದಿಸುತ್ತದೆ. ಎಲ್ಲ ಉಪವ್ಯವಸ್ಥೆಗಳೂ ನಿರ್ದಿಷ್ಟ ಕ್ಷಣದಲ್ಲಿ ತಮ್ಮತಮ್ಮ ಕಾರ್ಯವೆಸಗಬೇಕು ಹಾಗೂ ಪ್ರಸಾರವಾಗುವ ಸ್ಪಂದಗಳ ಉದ್ದ ಮತ್ತು ನಡುವಿನ ಅವಧಿ ನಿಷ್ಕøಷ್ಟವಾಗಿರಬೇಕು. ಇಂತಾಗುವಂತೆ ಮಾಡುವುದು ಮಾಡ್ಯುಲೇಟರ್‍ನ ಕಾರ್ಯ.

ಪ್ರೇಷಕ: ಸಾಮಾನ್ಯವಾಗಿ ಉಚ್ಚತೀವ್ರತೆಯ ಉಚ್ಚಆವೃತ್ತಿ ರೇಡಿಯೊ ತರಂಗ ಸ್ಪಂದಗಳನ್ನು ನಿಷ್ಕøಷ್ಟ ಕಾಲಾಂತರಗಳಲ್ಲಿ ಉತ್ಪಾದಿಸುತ್ತದೆ. ಕೆಲವು ರೇಡಾರ್ ವ್ಯವಸ್ಥೆಗಳಲ್ಲಿ ಅವಿಚ್ಛಿನ್ನ ರೇಡಿಯೊ ತರಂಗಗಳನ್ನು ಉತ್ಪಾದಿಸಬಲ್ಲ ಪ್ರೇಷಕಗಳ ಬಳಕೆಯೂ ಉಂಟು (ಉದಾ: ಡಾಪ್ಲರ್ ರೇಡಾರ್).  ಕಡಿಮೆ ಸಾಮಥ್ರ್ಯದ ರೇಡಿಯೊ ಆವೃತ್ತಿಯ (ಆರ್‍ಎಫ್) ಆಕರ ಅವಲಂಬಿತ ಉಚ್ಚ ಸಾಮಥ್ರ್ಯ ಆಂದೋಲಕ (ಉದಾ: ಮ್ಯಾಗ್ನೆಟ್ರಾನ್) ಅಥವಾ ಸೂಕ್ಮತರಂಗ ಪ್ರವರ್ಧಕ (ಉದಾ: ಕ್ಲೈಸ್ಟ್ರಾನ್) ಪ್ರೇಷಕಕ್ಕೆ ಅವಶ್ಯವಾದ ಸಾಮಥ್ರ್ಯ (ಪವರ್) ಒದಗಿಸುತ್ತದೆ.
ಡ್ಯೂಪ್ಲೆಕ್ಸರ್: ರೇಡಿಯೊತರಂಗ ಪ್ರಸಾರ ಮತ್ತು ಪ್ರತಿಫಲಿತ ತರಂಗಗಳ ಅಭಿಗ್ರಹಣ ಇವೆರಡೂ ಆಂಟೆನದ ಕಾರ್ಯಗಳು. ಒಂದೇ ಆಂಟೆನ ಈ ಎರಡೂ ಕಾರ್ಯಗಳನ್ನು ಮಾಡಲು ನೆರವಾಗುವ ಡ್ಯೂಪ್ಲೆಕ್ಸರ್ ಮೂಲತಃ ಒಂದು ಎಲೆಕ್ಟ್ರಾನಿಕ್ ಸ್ವಿಚ್. ಯುಕ್ತ ಸಮಯಗಳಲ್ಲಿ ಆಂಟೆನವನ್ನು ಪರ್ಯಾಯವಾಗಿ ಪ್ರೇಷಕಕ್ಕೂ ಅಭಿಗ್ರಾಹಕಕ್ಕೂ ಸಂಪರ್ಕಿಸುವುದು ಇದರ ಕಾರ್ಯ.
ಆಂಟೆನ: ಪ್ರೇಷಕ ಉತ್ಪಾದಿಸಿದ ರೇಡಿಯೊತರಂಗ ಸ್ಪಂದ ಅಥವಾ ಅವಿಚ್ಛಿನ್ನ ತರಂಗಗಳನ್ನು ನಿರ್ದೇಶಿತ ದೂಲರೂಪದಲ್ಲಿ ಪ್ರೇಷಿಸುವುದು; ಮರಳಿ ಬಂದ ಪ್ರತಿಫಲಿತ ತರಂಗಗಳನ್ನು ಅಭಿಗ್ರಹಿಸಿ ಅಭಿಗ್ರಾಹಕಕ್ಕೆ ರವಾನಿಸುವುದು ಇದರ ಕಾರ್ಯ. ಉದ್ದೇಶಕ್ಕೆ ತಕ್ಕಂತೆ ಇದರ ವಿನ್ಯಾಸ. 

ಚಿತ್ರ-ರೇಡಿಯೊ-ಆಂಟೆನದ-ಭಾಗಗಳು

ಅಭಿಗ್ರಾಹಕ: ಆಂಟೆನ ವ್ಯವಸ್ಥೆಯಿಂದ ಬರುವ ದುರ್ಬಲ ರೇಡಿಯೊ ಆವೃತ್ತಿ ಪ್ರತಿಧ್ವನಿಗಳನ್ನು ಯುಕ್ತ ಸಂಸ್ಕರಣ ಪ್ರಕ್ರಿಯೆಗಳಿಂದ ಸೂಕ್ಷ್ಮ ಪರಿಶೀಲನಾರ್ಹ ದೃಶ್ಯ ಸಂಜ್ಞೆಯಾಗಿ ಪರಿವರ್ತಿಸಿ ಸೂಚಕಕ್ಕೆ ರವಾನಿಸುವುದು ಇದರ ಕಾರ್ಯ. ರೇಡಾರ್ ವ್ಯವಸ್ಥೆಯಲ್ಲಿ ಬಳಸುವ ಉಚ್ಚ ಆವೃತ್ತಿಯ ರೇಡಿಯೊ ತರಂಗಗಳನ್ನು ಪ್ರವರ್ಧಿಸುವುದು ಬಲು ಕಷ್ಟ. ಆದ್ದರಿಂದ ಪ್ರತಿಧ್ವನಿಯನ್ನು ಪ್ರವರ್ಧಿಸಬಹುದಾದ ಕಡಿಮೆ ಆವೃತ್ತಿಯ ತರಂಗಗಳಾಗಿ ಪರಿವರ್ತಿಸಲು ಸೂಪರ್‍ಹೆಟರೊಡೈನ್ ಅಭಿಗ್ರಾಹಕಗಳ ಬಳಕೆ ಉಂಟು.

ಸೂಚಕ: ಸಂಸ್ಕರಿತ ಮಾಹಿತಿಯನ್ನು ಅಪೇಕ್ಷಿತ ರೀತಿಯಲ್ಲಿ ಪ್ರದರ್ಶಿಸುವುದು ಇದರ ಕಾರ್ಯ. ರೇಡಾರ್ ವ್ಯವಸ್ಥೆಯ ಬಳಕೆಯ ಉದ್ದೇಶ ಸಾಧನೆಗೆ ತಕ್ಕುದಾದ ಸೂಚಕದ ಬಳಕೆ. ಬಹುತೇಕ ಸನ್ನಿವೇಶಗಳಲ್ಲಿ ಇದು ಗಣಕದ ಪ್ರದರ್ಶಕ ವ್ಯವಸ್ಥೆಯನ್ನು ಹೋಲುತ್ತದೆ.

ರೇಡಾರ್‍ನ ದಕ್ಷತೆಯನ್ನು ಪ್ರಭಾವಿಸುವ ಕಾರಕಗಳು: ವಸ್ತುವಿನ ದೂರ, ಕ್ಷಿತಿಜಾಂಶ ಮತ್ತು  ಉನ್ನತಿ ಇವನ್ನು ಎಷ್ಟು ನಿಖರವಾಗಿ ನಿರ್ಧರಿಸುತ್ತದೆ ಎಂಬುದು ರೇಡಾರ್‍ನ ದಕ್ಷತೆಯ ಸೂಚಿ. ಇದು ರೇಡಾರ್‍ನ ಪೃಥಕ್ಕರಣ (ರೆಸೊಲ್ಯೂಶನ್) ಮತ್ತು ವಾಯುಮಂಡಲದ ಉಪಾಧಿಗಳನ್ನು ಅವಲಂಬಿಸಿದೆ. 

ಪೃಥಕ್ಕರಣದಲ್ಲಿ ಎರಡು ಬಗೆ: 1. ಒಂದೇ ಕ್ಷಿತಿಜಾಂಶದಲ್ಲಿದ್ದರೂ ಭಿನ್ನ ದೂರಗಳಲ್ಲಿರುವ ಎರಡು ವಸ್ತುಗಳನ್ನು ಅಂತೆಯೇ ಗುರುತಿಸುವ ಸಾಮಥ್ರ್ಯ ಅಥವಾ ವ್ಯಾಪ್ತಿ ಪೃಥಕ್ಕರಣ. ಇದು ಪ್ರೇಷಿತ ಸ್ಪಂದದ ಅಗಲ, ಲಕ್ಷ್ಯಗಳ ಗಾತ್ರ ಹಾಗೂ ಸ್ವರೂಪ, ಅಭಿಗ್ರಾಹಕ ಮತ್ತು ಸೂಚಕಗಳ ದಕ್ಷತೆ ಇವನ್ನು ಅವಲಂಬಿಸಿದೆ. 2. ಕ್ಷಿತಿಜಾಂಶಗಳಲ್ಲಿ ಅಲ್ಪ ವ್ಯತ್ಯಾಸವಿದ್ದರೂ ಒಂದೇ ದೂರದಲ್ಲಿರುವ ಎರಡು ವಸ್ತುಗಳನ್ನು ಅಂತೆಯೇ ಗುರುತಿಸುವ ಸಾಮಥ್ರ್ಯ ಅಥವಾ ಕ್ಷಿತಿಜಾಂಶ ಪೃಥಕ್ಕರಣ. ಲಕ್ಷ್ಯಗಳ ವ್ಯಾಪ್ತಿ ಮತ್ತು ಪ್ರೇಷಿತ ದೂಲದಗಲವನ್ನು ಇದು ಅವಲಂಬಿಸಿ ದೆ. ದೂಲದಗಲವನ್ನು ಆಂಟೆನದ ಗಾತ್ರ ಮತ್ತು ಆಕಾರ ನಿರ್ಧರಿಸುತ್ತದೆ.

ತಾಪ ಪ್ರತಿಲೋಮನ (ಟೆಂಪರೇಚರ್ ಇನ್‍ವರ್ಶನ್), ಆದ್ರ್ರತೆ ಇಳಿಕೆ (ಮಾಯ್‍ಶ್ಚರ್ ಲ್ಯಾಪ್ಸ್), ನೀರಹನಿಗಳು, ದೂಳಿನ ಕಣಗಳು, ವೈದ್ಯುತ ಕ್ಷೋಭೆ, ಎಲೆಕ್ಟ್ರಾನಿಕ್ ಚಟುವಟಿಕೆಗಳು ಮುಂತಾದವು ದಕ್ಷತೆಯನ್ನು ಪ್ರಭಾವಿಸುವ ವಾಯುಮಂಡಲ ಉಪಾಧಿಗಳು.

ಎರಡನೆಯ ಜಾಗತಿಕ ಯುದ್ಧಾನಂತರ ರೇಡಾರ್ ತಂತ್ರವಿದ್ಯೆ , ರೇಡಾರ್ ಕಣ್ತಪ್ಪಿಸಿ ನುಸುಳುವ ತಂತ್ರವಿದ್ಯೆ, ರೇಡಾರ್‍ಗಳಿಗೆ ತಪ್ಪು ಮಾಹಿತಿ ಒದಗಿಸುವ ತಂತ್ರವಿದ್ಯೆ ಎಲ್ಲವೂ ಬಲು ವೇಗವಾಗಿ ಅಭಿವರ್ಧಿ ಸುತ್ತಿವೆ.	
(ಎಚ್.ಆರ್.ಆರ್‍ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ